Sunday, 23 May 2010

ಗೆಳೆಯನಿಗೆ ...

ನೀನು ಸತ್ತೆ ಎಂದ ಸುದ್ದಿ ಬಹಳ ಸುಲಭದಲ್ಲಿ ಜೀರ್ಣ ಆಯಿತು. ಸುದ್ದಿ - ಟಿ.ವಿ. ಯಲ್ಲಿ ನೋಡಿದಂತೆ, ಪೇಪರಿನಲ್ಲಿ ಓದಿದಂತೆ - ರಸ್ತೆ ಅಪಘಾತದಲ್ಲಿ ಮೃತ್ಯು - ಬುದ್ಧಿಗೆ ಅರ್ಥವಾಯಿತು; ವಿಪರೀತ ಮದ್ಯ ಸೇವಿಸಿ, ಅತಿ ವೇಗದಲ್ಲಿ ಗಾಡಿ ಓಡಿಸಿ ಮುಂದೆ ಇದ್ದ ಟ್ರಕ್ ಗೆ ನೀನೆ ಹೊಡೆದು, ವಾಹನ ನಜ್ಜು ಗುಜ್ಜಾಗಿ ಸ್ಥಳದಲ್ಲೇ ಸಾವು.

ಆದರೆ ಇನ್ನೂ ಜೀರ್ಣವಾಗದ ವಿಷಯ ಎಂದರೆ ಇವು - ನಿನ್ನ ಡೊಳ್ಳು ಹೊಟ್ಟೆಗೆ ಹೊಡೆದು "ಧಡಿಯ" ಎನ್ನಲು ಸಾಧ್ಯ ಇಲ್ಲ. ಕೆನ್ನೆಗೆ ತಟ್ಟಿ "loafer " ಎನ್ನುವಂತಿಲ್ಲ. ನೀನು ಇನ್ನು ಯಾವತ್ತು ಆಫೀಸಿನಲ್ಲಿ ಕಾಣ ಸಿಗುವುದಿಲ್ಲ. ನನ್ನ ಸೀಟಿನ ಹತ್ತಿರ ಬಂದು, "ಹುಚ್ ನನ್ ಮಗನೆ", ಎನ್ನುವುದಿಲ್ಲ. ಕೂದಲು ಸವರಿಕೊಳ್ಳುತ್ತಾ, "ಏಯ್, ನಾನು ಸಕತ್ talent ಕಣೋ", ಎಂದು ನಿನ್ನ ಬೆನ್ನು ನೀನೆ ಚಪ್ಪರಿಸಿಕೊಳ್ಳುವುದಿಲ್ಲ. ಯಾವುದೋ ತಮಿಳು ಹಾಡಿನ ಅರ್ಥ ಕೇಳಿದರೆ ಚಿತ್ರ ಬಿಡಿಸಿ ವಿವರಿಸುವುದಿಲ್ಲ. ಸಣ್ಣ ವಿಷಯಕ್ಕೆ ಮುನಿಸಿಕೊಂಡು, " ಸರಿ ಇಲ್ಲ ಕಣೋ ನೀನು!" ಎನ್ನುವುದಿಲ್ಲ. ಕುಡಿದು ಪ್ರೀತಿ ಹೆಚ್ಚಾದಾಗ ಅತಿ ಭಾವುಕ S.M .S ಗಳನ್ನೂ ಕಳಿಸುವುದಿಲ್ಲ.  "ವಯನಾಡಿಗೆ ಟ್ರಿಪ್ ಹೋಗೋಣ?", ಎಂದು ಪದೇ ಪದೇ ಕೇಳುವುದಿಲ್ಲ.

ಇಲ್ಲ ಇಲ್ಲ ಇಲ್ಲ! ಯಾವ ವಿಷಯಕ್ಕೂ ನಾನು ಇಷ್ಟು ಕಣ್ಣೀರು ಸುರಿಸಿಲ್ಲ ಎಂದರೆ ಬಹುಷಃ ನೀನು ನಂಬುವುದಿಲ್ಲ. "ಹೋಗೋ ಹುಚ್ಚ!", ಎಂದು ಕೂದಲು ಸವರಿಕೊಂಡು ಮುಂದೆ ಹೋಗುತ್ತೀಯ ಅನ್ನಿಸುತ್ತೆ.

Wednesday, 7 January 2009

ಒಂದು ಪ್ರೇಮ ನಿರಾಕರಣೆಯ ನಂತರ ಅನ್ನಿಸಿದ್ದು....

ನೀನು ಇಲ್ಲ ಅಂದೆ,
ಒಳ್ಳೆಯದಾಯಿತು!
ನೀನು ಒಪ್ಪಿದ್ದರೆ
ರಂಗು ಮಾತಿನಲ್ಲಿ,
ಸುಳ್ಳು ಬಣ್ಣಗಳಲ್ಲಿ ,
ಒಂದಿಷ್ಟು ದರ್ಪದಲ್ಲಿ,
ಮತ್ತೊಂದಿಷ್ಟು ಜಾತಿ - ವರ್ಗಗಳ
ವಾದ - ವಿವಾದದಲ್ಲಿ
ಮುದ್ರಿತ ಲಗ್ನ ಪತ್ರಿಕೆಯಲ್ಲಿ,
ಬಂಧು - ಬಳಗದ ಕೊಂಕು ಮಾತಿನಲ್ಲಿ,
ಮಂಟಪದ ಜಗ ಮಗದಲ್ಲಿ,
ನಂತರ
ಬೆಂಕಿ ಪೆಟ್ಟಿಗೆಯಂಥ ಮನೆಯಲ್ಲಿ,
ಅದರ ಗೋಡೆಗಳಲ್ಲಿ,
ಬಿಗ್ ಬಜಾರು ಸ್ಪೆನ್ಸರ್ ಸೂಪರ್ ಮಾರ್ಕೆಟ್ಟು ಗಳಲ್ಲಿ ,
ಬದುಕು ಒಡ್ಡುವ ಸಾವಿರ ಪ್ರಶ್ನೆಗಳಲ್ಲಿ ,
ಪವಿತ್ರವೆಂದುಕೊಂಡಿರುವ ಈ ಪ್ರೇಮ
ಉಸಿರುಗಟ್ಟಿ ನರಳುತ್ತಿತ್ತು!